Description
ಇಂದು ಸ್ಪರ್ಧೆಯೇ ಬದುಕಿನ ಸಾಮಾನ್ಯ ಕೇಂದ್ರವಾಗಿರುವ ಸಂದರ್ಭದಲ್ಲಿ ನಾವಿದ್ದೇವೆ. ಜೀವನದ ಪ್ರತಿಯೊಂದು ಕ್ಷೇತ್ರವನ್ನೂ ಆವರಿಸಿರುವ ಸ್ಪರ್ಧಾತ್ಮಕತೆ ನಮ್ಮನ್ನು ದಿನನಿತ್ಯವೂ ಪೈಪೋಟಿಯ ಕಣದಲ್ಲಿ ನಿಲ್ಲಿಸಿದೆ. ಹಾಗಾಗಿ, ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಮಕ್ಕಳನ್ನು ಸ್ಪರ್ಧೆಗೆ ಸಿದ್ಧಪಡಿಸುವುದು ಎಲ್ಲೆಡೆ ಅನಿವಾರ್ಯವೆನಿಸಿದೆ. ’ಎಲ್ಲಕಡೆ ಗೆಲ್ಲಬೇಕು, ಉನ್ನತ ಹುದ್ದೆಗೆ ಹೋಗಬೇಕು. ಹೆಚ್ಚು ಹೆಚ್ಚು ಸಂಪಾದಿಸಬೇಕು. ನಾಲ್ಕು ಜನರಿಗೆ ಕಾಣುವಂತೆ ಐಷಾರಾಮೀ ಜೀವನ ನಡೆಸಬೇಕು’- ಎಂಬ ಮಾನಸಿಕತೆ ಬಾಲ್ಯದಿಂದಲೇ ಬಲಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ, ಎಲ್ಲರಲ್ಲಿ, ಇಂದು ’ವ್ಯಕ್ತಿತ್ವವಿಕಾಸ’ವೆಂದರೆ ’ವ್ಯಕ್ತಿಯೊಬ್ಬನ ಬಾಹ್ಯರೂಪ, ಲಕ್ಷಣ, ಸ್ಥಿತಿ, ಸಂಪತ್ತು, ಗಳಿಕೆ, ಮೊದಲಾದವುಗಳನ್ನು ಹೆಚ್ಚಿಸುವುದು’ ಎಂಬ ಸಂಕುಚಿತ ಕಲ್ಪನೆ ಮೂಡಿದೆ.
ಇಂಥ ಸಂದರ್ಭದಲ್ಲಿ ’ವ್ಯಕ್ತಿತ್ವವಿಕಾಸ’ವೆಂದರೆ ನೈಜವಾಗಿ ವ್ಯಕ್ತಿಯ ಅಂತರಂಗ ವಿಕಾಸ, ಅರಿಷಡ್ವರ್ಗಗಳಿಂದ ಆತ ಮುಕ್ತನಾಗುವ, ಮಾನಸಿಕವಾಗಿ ಪಕ್ವವಾಗುವ ಪ್ರಕ್ರಿಯೆ’ ಎಂಬ ಭಾರತೀಯ ದೃಷ್ಟಿಯನ್ನು ಸರಳ ಸುಂದರ ಉದಾಹರಣೆಗಳೊಂದಿಗೆ ವಿವರಿಸುವ ಕೃತಿ: ಯಾಂತ್ರಿಕತೆಯಿಂದ ಸಾರ್ಥಕತೆಯೆಡೆಗೆ.





