Description
ಮಹಾರಾಜರ ಹತ್ತು ನಿರ್ಣಾಯಕ ಯುದ್ಧಗಳು ಮತ್ತು ಕಟ್ಟಕಡೆಯ ಯುದ್ಧ ಒಂದು ವಿಶ್ಲೇಷಣೆ
ಛತ್ರಪತಿ ಶಿವಾಜಿ ಮಹಾರಾಜ್ ೧೬೪೫ ರಿಂದ ೧೬೮೦ರ ವರೆಗೆ ಕಾದಾಡಿದ ಯುದ್ಧಗಳ ಸಂಖ್ಯೆ, ಸುಮಾರು ೨೩೧. ಅವರ ಕಡೆಯ ಯುದ್ಧದ ಜೊತೆ ಇನ್ನೂ ಹತ್ತು ‘ನಿರ್ಣಾಯಕ’ ಯುದ್ಧಗಳನ್ನು ಆರಿಸಿಕೊಂಡು, ಅತ್ಯಂತ ತಾರ್ಕಿಕವಾಗಿ ಹಾಗೂ ಸತ್ಯಾಧಾರಿತ ಮಾಹಿತಿಗಳ ಹಿನ್ನೆಲೆಯಲ್ಲಿ ಭಟ್ ನಮಗಿಲ್ಲಿ ನೀಡಿದ್ದಾರೆ. “ಇತಿಹಾಸವನ್ನು ಹೀಗೂ ಅರ್ಥೈಸಿಕೊಂಡರೆ ಎಷ್ಟು ಚೆನ್ನ” ಎಂದು ಇದನ್ನೋದುವ ನಿಮಗೆ ಅನ್ನಿಸದೇ ಇರದು! ಭಟ್ ಆರಿಸಿಕೊಂಡಿರುವ ಹತ್ತು ನಿರ್ಣಾಯಕ ಯುದ್ಧಗಳಲ್ಲಿ ಎರಡರಲ್ಲಿ ಶಿವಾಜಿಗೆ ತೀವ್ರ ಸೋಲುಂಟಾಗುತ್ತದೆ. ಗೆಲುವಿನ ಇನ್ನೆಂಟು ಯುದ್ಧಗಳ ಜೊತೆ ಸೋಲಿನ ಇವೆರಡನ್ನೂ ಒಟ್ಟು ಮಾಡಿರುವ ಅಂಶ, “ನಿರ್ಣಾಯಕ” ಎಂಬ ಪದಕ್ಕೆ ಭಟ್ ನೀಡಿರುವ ಅತ್ಯಂತ ವಸ್ತು ನಿಷ್ಠವಾದ ಹಾಗೂ ಗೌರವದ ಸಂಕೇತ.
ಯುದ್ಧ ನಡೆದದ್ದು ಏಕೆ? ಹೇಗೆ? ಬಳಸಿದ ಯುದ್ಧತಂತ್ರಗಳಾವವು? ಫಲಾಫಲಗಳೆಂತು? ಗೆಲುವಿನಿಂದ ಗಳಿಸಿದ್ದೇನು? ಸೋಲಿನಿಂದ ಕಲಿತದ್ದೇನು? -ಹೀಗೆ ಈ ಕೃತಿ ಕೆಲವೇ ಕೆಲವು ನಿರ್ಣಾಯಕ ಯುದ್ಧಗಳ ಹಿನ್ನೆಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಒಟ್ಟು ವ್ಯಕ್ತಿತ್ವವನ್ನೇ ಕಟ್ಟಿಕೊಡುತ್ತದೆ. ಈ ನಿಟ್ಟಿನಲ್ಲಿ ಭಟ್ ಅವರ ಸಂಶೋಧನಾ ಪ್ರವೃತ್ತಿ ಹಾಗೂ ಶಿವಾಜಿ ಪರವಾದ ಶ್ರದ್ಧೆ-ಅನುಕರಣೀಯ ಹಾಗೂ ಶ್ಲಾಘನೀಯ. ಭಾರತಮಾತೆಯನ್ನು ಪೂಜಿಸುವ ಎಲ್ಲ ಸಜ್ಜನಬಂಧುಗಳಿಗೂ ಶಿವಾಜಿಯ ಈ ಕದನಕಥನ ನಿಜಕ್ಕೂ ಪ್ರೇರಣಾದಾಯಕ.