Description
ಮಹರ್ಷಿ ಅಗಸ್ತ್ಯರು ಭಾರತದ ಪುಣ್ಯಭೂಮಿಯ ಕಂಡ ಮಹಾಪುರುಷರಲ್ಲಿ ಒಬ್ಬರು. ರಾಮಾಯಣ ಮತ್ತು ಮಹಾಭಾರತದ ಕಥೆಗಳಲ್ಲಿ ಅತ್ಯಂತ ಮುಖ್ಯ ಭಾಗಗಳಲ್ಲಿ ಕಾಣಿಸಿಕೊಳ್ಳುವ ಋಷಿವರೇಣ್ಯರು ಅವರು. ಶ್ರೀರಾಮನಿಗೆ ಆತನ ವನವಾಸದ ಸಂದರ್ಭದಲ್ಲಿ ದಿವ್ಯಾಸ್ತ್ರಗಳನ್ನು ಕೊಟ್ಟವರಷ್ಟೇ ಅಲ್ಲ. ಯುದ್ಧಭೂಮಿಯಲ್ಲೂ ಆದಿತ್ಯಹೃದಯ ಮಂತ್ರವನ್ನು ಉಪದೇಶಿಸಿದ ಮಹಾತ್ಮರು. ಅಗಸ್ತ್ಯರನ್ನು ಓರ್ವ ತಾಪಸಿ ಎಂದಷ್ಟೇ ಅಲ್ಲದೆ ವಿಜ್ಞಾನಿಯಾಗಿ, ಭಾಷಾತಜ್ಞನಾಗಿ, ಯುದ್ಧಾಸ್ತ್ರಗಳ ಸಂಶೋಧಕರಾಗಿ, ವೈದ್ಯಶಾಸ್ತ್ರದ ಪಾರಂಗತರಾಗಿ ಹಲವು ರೀತಿಗಳಲ್ಲಿ ನಮ್ಮ ಶಾಸ್ತ್ರಪುರಾಣಗಳು ಚಿತ್ರಿಸಿವೆ. ಅವರು ವೇದಮಂತ್ರಗಳ ದ್ರಷ್ಟಾರರೂ ಹೌದು. ಅಗಸ್ತ್ಯರ ಪತ್ನಿ ಲೋಪಮುದ್ರಾ, ವೇದಋಷಿಕೆಯಲ್ಲಿ ಒಬ್ಬಾಕೆ. ಭಾರತದಲ್ಲಿ ಇಂದು ನಡೆಯುತ್ತಿರುವ ಉತ್ತರ-ದಕ್ಷಿಣ ಎಂಬ ವಿಭಜಕ ಶಕ್ತಿಗಳ ಸಂಚುಗಳು ಅಗಸ್ತ್ಯರ ಇತಿಹಾಸವನ್ನು ಓದಿದರೆ ಮುರಿದುಬೀಳುತ್ತವೆ. ಯಾಕೆಂದರೆ ಮಹರ್ಷಿ ಅಗಸ್ತ್ಯರು ಭಾರತದ ಉದ್ದಗಲಕ್ಕೂ ತನ್ನ ಪ್ರಭಾವ ಬೀರಿದವರು. ದಕ್ಷಿಣದಲ್ಲಿ ತನ್ನ ಬುದ್ಧಿರ್ಬಲದಿಂದ ಪ್ರಸಿದ್ಧರಾದವರು. ಮಾತ್ರವಲ್ಲ. ಜಾವಾದಂಥ ದೂರದೇಶಗಳಲ್ಲಿ ಕೂಡ ಪೂಜೆಗೂಳ್ಳುವರು. ಒಟ್ಟಾಗಿ ಹೇಳುವುದಾದರೆ ಅವರು ಬೃಹದ್ ಭಾರತದ ಬೌದ್ಧಿಕಶಕ್ತಿಯ ಸಮರ್ಥ ಪ್ರತಿನಿಧಿ.
ಅಗಸ್ತ್ಯರ ಬದುಕಿನ ವಿವರಗಳನ್ನು ಒಂದೆಡೆಯಲ್ಲಿ ಸಿಗುವಂತೆ ದಾಖಲಿಸಿರುವುದು ಈ ಕೃತಿಯ ಹೆಗ್ಗಳಿಕೆ.